ನಯಾಗರ - ಆನ್ - ದಿ - ಲೇಕ್

	ಕೆನಡದ ಆಂಟೆರಿಯೋ ಪ್ರಾಂತ್ಯದಲ್ಲಿ ಲಿಂಕನ್ ಕೌಂಟಿಗೆ ಸೇರಿದ ಪಟ್ಟಣ. ಆಂಟೆರಿಯೋ ಸರೋವರದ ಅಂಚಿನಲ್ಲಿ, ನಯಾಗರ ನದಿ ಸೇರುವ ಸ್ಥಳದ ಬಳಿ, ಉತ್ತರದಲ್ಲಿರುವ ನಯಾಗರ ಜಲಪಾತದಿಂದ 24 ಕಿ.ಮೀ. ದೂರದಲ್ಲಿದೆ. ಆಗ್ನೇಯದಲ್ಲಿರುವ ಟರಾಂಟೋ ಪಟ್ಟಣಕ್ಕೆ ಇಲ್ಲಿಂದ 54 ಕಿ.ಮೀ. ಇದಕ್ಕೆ ಮಿಷಿಗನ್ ರೈಲ್ವೆ ಮಾರ್ಗದ ಸಂಪರ್ಕವಿದೆ. ಇದರ ಸುತ್ರಮುತ್ತಣ ಪ್ರದೇಶದಲ್ಲಿ ಹಣ್ಣುಗಳನ್ನು ಬೆಳೆಯುತ್ತಾರೆ. ಬೇಸಗೆಯಲ್ಲಿ ವಿಹಾರಾರ್ಥವಾಗಿ ಜನ ಇಲ್ಲಿಗೆ ಬರುತ್ತಾರೆ. 1780ರಲ್ಲಿ ಈ ಪಟ್ಟಣ ಸ್ಥಾಪಿತವಾಯಿತು. 1796ರ ವರೆಗೆ ಇದು ಮೇಲಣ ಕೆನಡದ ಆಡಳಿತ ಕೇಂದ್ರವಾಗಿತ್ತು. ನಯಾಗರ ಜಲಪಾತದ ಬಳಿಯ ಎರಡು ಪಟ್ಟಣಗಳ ಹಾಗೂ ಈ ಪಟ್ಟಣದ ಹೆಸರುಗಳಿಂದ ಗೊಂದಲವಾಗದಂತೆ ಇದಕ್ಕೆ ನಯಾಗರ-ಆನ್-ದಿ-ಲೇಕ್ ಎಂಬ ಹೆಸರನ್ನು ಕೊಡಲಾಗಿದೆ. ಇದನ್ನು ನಯಾಗರ ಎಂದಷ್ಟೇ ಕರೆಯುವುದುಂಟು. ಜನಸಂಖ್ಯೆ 12,501 (1971).
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ